ಶಾಲೆ ನಡೆದು ಬಂದ ದಾರಿ
ಬೃಂದಾವನ ಕನ್ನಡ ಕಲಿಗಳ ಅಭಿಯಾನದ ಚೊಚ್ಚಲ ಕನ್ನಡ ಶಾಲೆ ನವೆಂಬರ್ ೭, ೨೦೧೫ ರಂದು ಸೌತ್ ಬೃಂಸ್ವಿಕ್ ನಗರದಲ್ಲಿ ಆರಂಭಗೊಂಡಿತು.ಅನೇಕ ಸಹೃದಯಿ ಕನ್ನಡ ಸ್ವಯಂಸೇವಕರ ಸಹಕಾರದಿಂದ ಬೃಂದಾವನ ಮಿಲನ ತಂಡದ ನೇತೃತ್ವದಲ್ಲಿ ಕನ್ನಡ ಶಾಲೆಯ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಆರಂಭದ ದಿನಗಳಲ್ಲಿ ಸ್ವಯಂ ಸೇವಕರು ಒಟ್ಟಾಗಿ ಕಲೆತು ಮನೆಯಲ್ಲೇ ಪಠ್ಯ ಪುಸ್ತಕಗಳನ್ನು ಮುದ್ರಿಸುತ್ತಿದ್ದೆವು. ಅದರ ಆನಂದವೇ ಭಿನ್ನವಾಗಿತ್ತು. ಎಲ್ಲರ ಪರಿಶ್ರಮದಿಂದ ಬೃಂದಾವನ ಕನ್ನಡ ಶಾಲೆಯು ಈಗ ಎತ್ತರವಾಗಿ ಬೆಳೆದಿದೆ.
ವಿದ್ಯಾರ್ಥಿಗಳಿಗೆ ಮಾತೃಭಾಷೆಯಾದ ಕನ್ನಡವನ್ನು ಓದಿ-ಬರೆಯಲು ಕಲಿಸುವುದಷ್ಟೇ ಅಲ್ಲದೆ, ಸಂಭಾಷಣಾ ಕೌಶಲ್ಯದ ಬೆಳವಣಿಗೆಗೂ ಆದ್ಯತೆ ನೀಡಿ, ಸಾಮಾಜಿಕ ಜೀವನವನ್ನು ಉತ್ತಮಗೊಳಿಸಲು ಬೇಕಾದ ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಕಲೆ-ಸಾಹಿತ್ಯದ ಅರಿವು ಮೂಡಿಸಿ ಮುಂದಿನ ಜನಾಂಗವು ಮುಂದುವರಿಸಿಕೊಂಡು ಹೋಗುವಂತೆ ಪ್ರೋತ್ಸಾಹಿಸುವುದೇ ಬೃಂದಾವನ ಕನ್ನಡ ಶಾಲೆಯ ಮುಖ್ಯ ಉದ್ದೇಶ.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ, ಸಂಸ್ಕಾರಯುತ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸೌತ್ ಬೃಂಸ್ವಿಕ್ ಕನ್ನಡ ಶಾಲೆಯು, ನುರಿತ ಪ್ರತಿಭಾವಂತ ಸ್ವಯಂ ಸೇವಕ ಶಿಕ್ಷಕರ ಸಹಕಾರದೊಂದಿಗೆ, ಈಗ ಕನ್ನಡ ಅಕ್ಯಾಡೆಮಿಯೊಂದಿಗೆ ಕೈ ಜೋಡಿಸಿ, ಮಕ್ಕಳಿಗೆ ಉತ್ತಮವಾದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಭೋದನಾ ಕ್ರಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಂಡು ಕನ್ನಡ ಭಾಷಾ ಜ್ಞಾನದ ಬೆಳಕನ್ನು ಪಸರಿಸುತ್ತಾ ಸತ್ಪಥದಲ್ಲಿ ಮುನ್ನಡೆಯುತ್ತಿದೆ.
ನಮ್ಮ ಶಾಲೆಗಳಿಗೆ ಬೆನ್ನೆಲುಬಾಗಿರುವ ಸ್ವಯಂ ಸೇವಕರಿಗೂ, ನಮ್ಮನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಿರುವ ಪೋಷಕರಿಗೂ ಮತ್ತು ಕನ್ನಡ ಕಲಿಯುತ್ತಿರುವ ಕನ್ನಡ ಕಲಿಗಳಿಗೂ ನಮ್ಮ ವಂದನೆಗಳು ಮತ್ತು ಅಭಿನಂದನೆಗಳು.